ಎಂಗೆಲ್, ಎನ್ಸ್ರ್ಟ್
	1821-1896. ಜರ್ಮನ್ ಸಂಖ್ಯಾಶಾಸ್ತ್ರಜ್ಞ. ಆರ್ಥಿಕ ವರ್ತನೆಯನ್ನು ಕ್ರಮಬದ್ಧವಾಗಿ ವಿಶ್ಲೇಷಣೆಮಾಡಲು ಪ್ರಪ್ರಥಮವಾಗಿ ಸಾಂಖ್ಯಿಕೀಯ ಅಧ್ಯಯನ ನಡೆಸಿದವನೀತ. ಡ್ರೆಸ್óಡೆನ್‍ನಲ್ಲಿ ಹುಟ್ಟಿದ ಎಂಗೆಲ್ ಜರ್ಮನಿಯ ಗಣಿವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಪ್ಯಾರಿಸಿನ ಗಣಿಯೊಂದರಲ್ಲಿ ಉದ್ಯೋಗ ಹಿಡಿದ. ಅಲ್ಲಿ ಇವನಿಗೆ ಕುಟುಂಬಗಳ ಆಯ-ವ್ಯಯ ಅಧ್ಯಯನದಲ್ಲಿ ಆದ್ಯಪುರುಷನೆನಿಸಿದ ಫ್ರೆಡರಿಕ್ ಲಪ್ಲೇಯ ಪರಿಚಯವಾಯಿತು; ಈ ಪರಿಚಯ ಪ್ರಭಾವವಾಗಿ ಪರಿಣಮಿಸಿತು. ಎಂಗೆಲನ ಭಾವೀ ವಿಚಾರದೀಪ್ತಿಗೆ ಇದೇ ಮೂಲ. ಈತನ ಮೇಲೆ ಹೆಚ್ಚಿನ ಪ್ರಭಾವ ಬೀರಿದ ಇನ್ನೊಬ್ಬ ವ್ಯಕ್ತಿಯೆಂದರೆ ಬೆಲ್ಜಿಯಮ್ಮಿನ ಅಡಾಲ್ಫ್ ಕೇಟ್ಲೆ. ಅಳತೆಮಾಡಿ ತೋರಿಸಬಹುದಾದ ಸಾಮಾಜಿಕ ಸೂತ್ರಗಳನ್ನು ಕಂಡುಹಿಡಿಯಬಹುದೆಂಬುದು ಕೇಟ್ಲೆಯ ನಂಬಿಕೆಯಾಗಿತ್ತು. ಬೆಲ್ಜಿಯಮ್ಮಿನಲ್ಲಿ ಕೆಲಕಾಲ ಇದ್ದಮೇಲೆ ಎಂಗೆಲ್ ಜರ್ಮನಿಗೆ ಹಿಂದಿರುಗಿದ. ಸಂಖ್ಯಾಶಾಸ್ತ್ರವೇ ಈತನ ವೃತ್ತಿಯಾಯಿತು. ಸ್ಯಾಕ್ಸನಿ ಮತ್ತು ಪ್ರಷ್ಯಗಳಲ್ಲಿ ಈತ ಸಾಂಖ್ಯಿಕೀಯ ವಿಭಾಗದ ನಿರ್ದೇಶಕನಾಗಿದ್ದ (1850-1882).

	ಅಂಕಿ-ಮಗ್ಗಿಯ ಗಣಿತದಲ್ಲಿ ಎಂಗೆಲನ ಆಸಕ್ತಿ ತೀವ್ರವಾಗಿತ್ತು. ಅಧಿಕೃತ ಅಂಕಿ-ಅಂಶಗಳ ಆಧುನಿಕ ಸಂಪ್ರದಾಯದ ಸ್ಥಾಪನೆಗಾಗಿ ಎಂಗೆಲ್ ಮಾಡಿದ ಪ್ರಯತ್ನ ಅಗಾಧ. ಇವು ತಮ್ಮ ಕಥೆಯನ್ನು ತಾವೇ ಹೇಳಿಕೊಳ್ಳುವ ಹಾಗಾಗಬೇಕು; ಇವು ಎಲ್ಲರಿಗೂ ಲಭ್ಯವಾಗಬೇಕು-ಎಂಬುದು ಈತನ ಕನಸು.

	ಆಡಳಿತವನ್ನು ಪರಿಶುದ್ಧಗೊಳಿಸಬೇಕೆಂದೂ ಸಮಾಜ ಸುಧಾರಣೆಯಾಗಬೇಕೆಂದೂ ಎಂಗೆಲ್ ಬಹಳ ಶ್ರಮಿಸಿದ. ಜರ್ಮನಿಯ ವ್ಯವಸಾಯಕ್ಕೆ ರಕ್ಷಣೆ ನೀಡುವ ಬಿಸ್ಮಾರ್ಕನ ನೀತಿಯನ್ನು ವಿರೋಧಿಸಿ ಎಂಗೆಲ್ ಬರೆದ ಲೇಖನದಿಂದ ಆಡಳಿತಗಾರರಿಗೆ ಅಸಮಾಧಾನವಾಯಿತು. ಲೇಖನದಲ್ಲಿ ಎಂಗೆಲನ ಹೆಸರಿಲ್ಲದಿದ್ದರೂ ಇದು ಈತನೇ ಬರೆದದ್ದೆಂದು ಗೊತ್ತಾಯಿತು. ಎಂಗೆಲ್ ಕೆಲಸ ಕಳೆದುಕೊಂಡ.

	ಎಂಗೆಲನ ಕೆಲಸ ಹೋದರೂ ಹೆಸರು ಹೋಗಲಿಲ್ಲ. ಅದು ಚಿರಾಯು, ಅರ್ಥಶಾಸ್ತ್ರಕ್ಷೇತ್ರಕ್ಕೆ ಸಂಬಂಧಿಸಿದಂತೆ ಈತ ರಚಿಸಿದ ಸೂತ್ರ ಎಂಗೆಲನ ಸೂತ್ರವೆಂದು ಪ್ರಸಿದ್ಧವಾಗಿದೆ (ನೋಡಿ- ಎಂಗೆಲನ-ಸೂತ್ರ). ಒಬ್ಬನ ವರಮಾನ ಹೆಚ್ಚಿದಂತೆಲ್ಲ ಆತ ಆಹಾರವಸ್ತುಗಳ ಮೇಲೆ ಮಾಡುವ ವೆಚ್ಚದ ಪ್ರಮಾಣ ತಗ್ಗುತ್ತದೆಯೆಂದು ಮುಂತಾಗಿ ಈತ ನೀಡಿದ ಸೂತ್ರ ವೈಚಾರಿಕ ಕ್ರಾಂತಿಯನ್ನೆ ಉಂಟುಮಾಡಿತೆನ್ನಬಹುದು. ಕಾರ್ಮಿಕರ ವರಮಾನ ಹೆಚ್ಚಿದರೆ ಆಹಾರ ಸಾಮಗ್ರಿಗೆ ಬೇಡಿಕೆಯೂ ಜನಸಂಖ್ಯೆಯೂ ಅತಿಯಾಗುತ್ತದೆ-ಎಂಬ ಧಾಟಿಯಲ್ಲಿ ಸಾಗುವ ಮಾಲ್ಥಸನ ಅಂಜಿಕೆಗಳಿಗೆ ಈ ಸೂತ್ರಗಳು ಉತ್ತರ ರೂಪವೆನ್ನಬಹುದು.

	ಆಹಾರವೆಚ್ಚಕ್ಕೆ ಸಂಬಂಧಿಸಿದ ಸೂತ್ರಗಳಂತೆ ವಸ್ತ್ರ ವಸತಿಗಳೇ ಮುಂತಾದ ಕ್ಷೇತ್ರಗಳ ವೆಚ್ಚಗಳ ಬಗ್ಗೆಯೂ ಸಾಮಾನ್ಯ ಸೂತ್ರ ರಚಿಸಬೇಕೆಂದು ಅನಂತರ ಅನೇಕರು ಪ್ರಯತ್ನ ನಡೆಸಿದರು. ಆದರೆ ಅವುಗಳ ವರ್ತನೆಗಳು ಆಹಾರದ ವಿಚಾರದಲ್ಲಿದ್ದಂತೆ ಸರಳವಲ್ಲ. ಆದ್ದರಿಂದ ಆ ಸೂತ್ರಗಳು ಇಷ್ಟೊಂದು ವ್ಯಾಪಕವಲ್ಲ.

	ಒಂದು ಅಥವಾ ಹಲವು ವೆಚ್ಚದ ಬಾಬುಗಳಿಗೂ ವರಮಾನ ಅಥವಾ ಒಟ್ಟು ವೆಚ್ಚಕ್ಕೂ ಇರುವ ಸಂಬಂಧ; ಇದು ಎಂಗೆಲ್ ರೇಖೆ ಎಂದು ಪ್ರಸಿದ್ಧವಾಗಿದೆ. ಇದನ್ನೇ ಆಧರಿಸಿ ಕೇನ್ಸ್ ಅನುಭೋಗ ಅನುಚರಿಯನ್ನು ನಿರ್ಮಿಸಿದ್ದಾನೆ. ಆದರೆ ಎಂಗೆಲನಿಗೆ ಆ ಕಾಲದಲ್ಲಿ ಈ ವಿಧಾನ ಗೊತ್ತಿರಲಿಲ್ಲ. ಈ ಬಗ್ಗೆ ಕೇನ್ಸನ ಮನಃಶ್ಯಾಸ್ತ್ರೀಯ ಸೂತ್ರ ಎಂಗೆಲನ ಸೂತ್ರದ ವಂಶದಲ್ಲೆ ಬಂದ ಸಂತಾನವೆಂಬುದು ಶ್ವತಃಸ್ಸಿದ್ಧ.

	ಅಂತೂ ಎಂಗೆಲ್ ತನ್ನ ಪರಿಮಿತ ಕ್ಷೇತ್ರದಲ್ಲೇ ಬಹಳಮಟ್ಟಿಗೆ ಮುಂದುವರಿದು ಕುಟುಂಬಗಳ ಆಯ-ವ್ಯಯದ ಬಗ್ಗೆ ಎಷ್ಟೋ ಕೆಲಸಮಾಡಿದ. ಈ ಬಗೆಯ ಲೆಕ್ಕಾಚಾರದಲ್ಲಿ ಗಂಡು, ಹೆಣ್ಣು, ವಯಸ್ಕ, ಶಿಶು ಮುಂತಾದ ಲಿಂಗಭೇದ ವಯೋಭೇದಗಳಿಗೆ ಅನುಗುಣವಾಗಿ ಅನುಸರಿಸಬೇಕಾದ ತೂಕದ ವಿಚಾರವಾಗಿ ಸಾಧಿಸಿರುವ ಮುನ್ನಡೆಗೆಲ್ಲ ಎಂಗೆಲನ ದುಡಿಮೆಯೇ ತಳಹದಿ. ಶಿಕ್ಷಣದ ಆರ್ಥಿಕ ಮುಖವನ್ನು ಕುರಿತೂ ತನ್ನ ಗ್ರಂಥವೊಂದರಲ್ಲಿ ಈತ ವಿಚಾರಮಾಡಿದ್ದಾನೆ.

	ಅಮೆರಿಕದಲ್ಲೂ ಎಂಗೆಲನ ಹೆಸರು ಬಹಳ ವ್ಯಾಪಿಸಿತ್ತು. ಅಲ್ಲಿ ಈತನಿಗಿದ್ದ ಏಕಲವ್ಯಶಿಷ್ಯರು ಅನೇಕ. ಅಂತರರಾಷ್ಟ್ರೀಯ ಸಾಂಖ್ಯಿಕೀಯ ಕಾಂಗ್ರೆಸ್ಸಿನಲ್ಲಿ ಎಂಗೆಲ್ ಹೆಚ್ಚು ಆಸಕ್ತಿ ತಳೆದಿದ್ದ. ಮುಂದೆ ಇದರ ಸ್ಥಾನದಲ್ಲಿ ಹುಟ್ಟಿದ ಅಂತರರಾಷ್ಟ್ರೀಯ ಸಾಂಖ್ಯಿಕೀಯ ಸಂಸ್ಥೆಯ (ಇಂಟರ್‍ನ್ಯಾಷನಲ್ ಸ್ಯಾಟಿಸ್ಟಿಕಲ್ ಇನ್ಸ್‍ಟಿಟ್ಯೂಟ್) ಸ್ಥಾಪಕರ ಪೈಕಿ ಎಂಗೆಲನೂ ಒಬ್ಬ.

	ಎಂಗೆಲನ ಆಸಕ್ತಿಯ ಹರವು ಬಲು ದೊಡ್ಡದು. ಸಂಖ್ಯಾಶಾಸ್ತ್ರ, ಆಡಳಿತ, ಸಮಾಜ ಸುಧಾರಣೆಗಳೇ ಅಲ್ಲದೆ ಕೈಗಾರಿಕೆ, ಕಾರ್ಮಿಕ ಜಗತ್ತು, ತೆರಿಗೆ, ವಿಮೆ, ಬ್ಯಾಂಕಿಂಗ್, ಯುದ್ಧ ಮುಂತಾದ ನಾನಾ ವಿಚಾರಗಳನ್ನು ಕುರಿತು ಈತ ವಿಪುಲವಾಗಿ ಬರೆದಿದ್ದಾನೆ.												
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ